ಕರ್ಬಿ, ವಿಲಿಯಂ: ೧೮೧೭-೧೯೦೬. ಕೆನಡದ ಕಾದಂಬರಿಕಾರ. ಫ್ರೆಂಚರ ಆಳ್ವಿಕೆಯ ಕಾಲದ ಕ್ವಿಬೆಕಿನಲ್ಲಿನ ಐತಿಹಾಸಿಕ ಸಾಹಸಮಯ ಜನಜೀವನವನ್ನು ಚಿತ್ರಿಸುವ ದಿ ಗೋಲ್ಡನ್ ಡಾಗ್ (೧೮೭೭) ಎಂಬ ಕಾದಂಬರಿಯನ್ನು ರಚಿಸಿ ಖ್ಯಾತಿಗಳಿಸಿದ. ಈತ ಜನಿಸಿದ್ದು ಇಂಗ್ಲೆಂಡಿನ ಕಿಂಗ್ಸ್ಟನ್-ಅಪಾನ್-ಹಿಲ್ ಎಂಬಲ್ಲಿ. ಚಿಕ್ಕವನಿದ್ದಾಗಲೇ ತನ್ನ ತಾಯಿತಂದೆಯ ರೊಂದಿಗೆ ಸಂಯುಕ್ತ ಸಂಸ್ಥಾನಕ್ಕೆ ಬಂದು ಆಂಟೇರಿಯೋವಿನ ನಯಾಗರಾದಲ್ಲಿ ನೆಲೆಸಿದ (೧೮೩೯). ಅಲ್ಲಿ ಪತ್ರಿಕೋದ್ಯಮವನ್ನು ಕೈಗೊಂಡು ೨೦ ವರ್ಷಕ್ಕೂ ಹೆಚ್ಚು ಕಾಲ ನಯಾಗರಾ ಮೇಲ್ ಎಂಬ ಪತ್ರಿಕೆಯ ಸಂಪಾದಕನಾಗಿದ್ದ. ಸುಂಕದ ಅಧಿಕಾರಿಯಾಗೂ ಸೇವೆ ಸಲ್ಲಿಸಿದ್ದುಂಟು (೧೮೭೧-೯೫). ೧೮೮೩ರಲ್ಲಿ ಈತ ಕೆನಡದ ರಾಯಲ್ ಸೊಸೈಟಿಯ ಚಾರ್ಟರ್ ಫೆಲೋ ಆಗಿ ಆಯ್ಕೆ ಹೊಂದಿದ.

ಒಟ್ಟಾರೆ ಈತ ಐದು ಪುಸ್ತಕಗಳನ್ನು ಬರೆದಿದ್ದಾನೆ. ಸಂಯುಕ್ತ ಸಾಮ್ರಾಜ್ಯದ ನಿಷ್ಠಾವಂತರ (ಯುನೈಟೆಡ್ ಎಂಪೈರ್ ಲಾಯಲಿಸ್ಟ್‌್ಸ) ವಲಸೆಯನ್ನು ಚಿತ್ರಿಸುವ, ಸ್ಪೆನ್ಸರನ ಕಾವ್ಯ ಮಾದರಿಯ ಕಾವ್ಯ ದಿ ಯು. ಇ. (೧೮೫೯); ದಿ ಗೋಲ್ಡನ್ ಡಾಗ್; ಮೆಮೊಯರ್ಸ್ ಆಫ್ ಸರ್ವೋಸ್ ಫ್ಯಾಮಿಲಿ (೧೮೮೪); ಕೆನಡದ ಪ್ರಾಕೃತಿಕ ದೃಶ್ಯಾವಳಿ, ಅಲ್ಲಿನ ಜನರ ಸಂಪ್ರದಾಯ ಮತ್ತು ಚರಿತ್ರೆಗಳನ್ನು ವರ್ಣಿಸುವ ಕವನಮಾಲೆ ಕೆನಡಿಯನ್ ಇಡಿಲ್ಸ್‌ (೧೮೯೪); ನಯಾಗರಾ ಜಿಲ್ಲೆಯ ಇತಿಹಾಸವನ್ನು ಕುರಿತ ಆನಲ್ಸ್‌ ಆಫ್ ನಯಾಗರಾ (೧೮೯೬) ಎಂಬ ಗದ್ಯಕೃತಿ-ಇವೇ ಆ ಐದು ಪುಸ್ತಕಗಳು. ದಿ ಗೋಲ್ಡನ್ ಡಾಗ್ ಇವನ ಮೇರುಕೃತಿ. ನ್ಯೂ ಫ್ರಾನ್ಸಿನ ಮೇಲ್ವಿಚಾರಕನಾದ ಫ್ರಾನ್ಕಾಯ್ಸ್‌ ಬಿಗಾಟನ ಜೀವನದ ಘಟನಾವಳಿಗಳನ್ನು ರೂಪಿಸುವ ಪ್ರಣಯ-ಸಾಹಸ-ರಮ್ಯಮಯ ಕಥೆಯನ್ನು ಚಿತ್ರಿಸುವಲ್ಲಿ, ಶ್ರೀಮಂತಿಕೆಯ ಮತ್ತು ಪುರ್ವಾಚಾರದ ಮೌಲ್ಯಗಳಲ್ಲಿ, ಶೌರ್ಯದಲ್ಲಿ, ಅಧಿಕಾರದಲ್ಲಿ ಪ್ರಭು ಮತ್ತು ರಾಜ್ಯನಿಷ್ಠೆಯಲ್ಲಿ, ಸಂಪ್ರದಾಯ ಮತ್ತು ಧರ್ಮನಿಷ್ಠೆಗಳಲ್ಲಿ ತನಗಿದ್ದ ನಂಬಿಕೆಗಳನ್ನು ರಸವತ್ತಾಗಿ ಈತ ಚಿತ್ರಿಸಿದ್ದಾನೆ. ಈ ಕೃತಿ ಕೆನಡದ ಅಭಿಜಾತ ಸಾಹಿತ್ಯದ ಶ್ರೇಣಿಗೆ ಸೇರಿಹೋಗಿದೆ. ನಯಾಗರಾದಲ್ಲೇ ಈತ ನಿಧನನಾದ.  	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ